ನೂರ್ ಜಹಾನ್ -
	ಮೊಗಲ್ ಚಕ್ರವರ್ತಿ ಜಹಾಂಗೀರನ ಹೆಂಡತಿ, ರಾಣಿ, ಜಹಾಂಗೀರ್ ಈಕೆಯನ್ನು 1611ರ ಮೇ ತಿಂಗಳಿನಲ್ಲಿ ವಿವಾಹವಾದ. ಇವಳ ಮೊದಲ ಹೆಸರು ಮಿಹರ್-ಉನ್-ನೀಸ್. ಈಕೆಯ ತಂದೆ ಮಿಜಾರ್ó ಘಿಯಾಸ್‍ಬೇಗ್ ಪರ್ಷಿಯಾದವನು. ಅವನು ಹೆಂಡತಿ ಮಕ್ಕಳೊಡನೆ ಭಾರತಕ್ಕೆ ಬರುತ್ತಿದ್ದಾಗ ಮಾರ್ಗದಲ್ಲಿ ಕಾಂದಹಾರ್‍ನಲ್ಲಿ ಈಕೆ ಹುಟ್ಟಿದಳು. ಅವನು ಜೀವನದ ಕಷ್ಟನಷ್ಟಗಳನ್ನು ಅನುಭವಿಸಿ, ಅಕ್ಬರನ ಬಳಿ ಕೆಲಸಕ್ಕೆ ಸೇರಿ ಉನ್ನತ ಹುದ್ದೆಗೆ ಏರಿದ. ಮಿಹರ್-ಉನ್-ನೀಸ್ ಸ್ಪುರದ್ರೂಪಿ; ಬುದ್ದಿವಂತೆ. ಇವಳಿಗೆ 17 ವರ್ಷ ಆಗಿದ್ದಾಗ ತಂದೆ ಈಕೆಯನ್ನು ಆಲಿ ಕುಲಿ ಬೇಗ್ ಇಸ್ತಾಝಿ ಎಂಬವನಿಗೆ ಕೊಟ್ಟು ಮದುವೆ ಮಾಡಿದ. ಅವನೂ ಪರ್ಷಿಯಾದ ಒಬ್ಬ ಸಾಹಸಿ. ಜಹಾಂಗೀರ್ ಚಕ್ರವರ್ತಿಯಾದ ಹೊಸತರಲ್ಲಿ ಅವನು ಆಲಿ ಕುಲಿ ಬೇಗನಿಗೆ ಬಂಗಾಲದ ಬದ್ರ್ವಾನನ್ನು ಜಹಗೀರಾಗಿ ಕೊಟ್ಟು ಷೇರ್ ಅಫ್‍ಘಾನ್ ಎಂಬ ಬಿರುದನ್ನು ಕೊಟ್ಟ. ಚಕ್ರವರ್ತಿ ವಿರುದ್ಧವಾದ ದಂಗೆಗಳಿಗೆ ಷೇರ್ ಅಫ್‍ಘಾನ್ ಪ್ರಚೋದನೆ ನೀಡುತ್ತಿದ್ದಾನೆಂಬ ಸುದ್ದಿ ತಿಳಿದು ಅವನನ್ನು ಶಿಕ್ಷಿಸಲು ಜಂಹಾಗೀರ್ ತನ್ನ ಸಾಕುತಮ್ಮ ಹಾಗೂ ಬಂಗಾಲದ ರಾಜ್ಯಪಾಲ ಕುತ್ಬ-ಉದ್-ದೀನ್‍ನ್ನು ಕಳಿಸಿದ. ಇವರಿಬ್ಬರ ನಡುವೆ ನಡೆದ ಕದನದಲ್ಲಿ ಕುತ್ಬ್-ಉದ್-ದೀನ್ ಸಾವಿಗೆ ಈಡಾದ. ಅವನ ಕಡೆಯವರು ಷೇರ್-ಅಫ್‍ಘಾನ್‍ನನ್ನು ಕೊಂದು ಮಿಹರ್-ಉನ್-ನೀಸ್‍ಳನ್ನು ಅವಳ ಹೆಣ್ಣು ಮಗುವಿನೊಂದಿಗೆ ಮೊಗಲ್ ಆಸ್ಥಾನಕ್ಕೆ ಕರೆತಂದರು. ನಾಲ್ಕು ವರ್ಷಗಳ ಅನಂತರ ಮಿಹರ್-ಉನ್-ನೀಸ್‍ಳನ್ನು ಜಹಾಂಗೀರ್ ಮದುವೆಯಾಗಿ ತನ್ನ ಪಟ್ಟದ ರಾಣಿಯಾಗಿ ಮಾಡಿದ. ನೂರ್-ಉದ್-ದೀನ್ ಎಂದು ಬಿರುದು ತಳೆದಿದ್ದ ಆತ ಅವಳಿಗೆ ನೂರ್-ಮಹಲ್ (ಅರಮನೆಯ ಬೆಳಕು) ಎಂದು ಕರೆದ. ಅನಂತರ ಅದನ್ನು ನೂರ್-ಜಹಾನ್ ಎಂದು ಬದಲಾಯಿಸಿದ. ರೂಪವತಿಯಾದ ಅವಳಲ್ಲಿ ಜಹಾಂಗೀರ್ ಹಿಂದಿನಿಂದಲೇ ಅನುರಕ್ತನಾಗಿದ್ದನೆಂದೂ ಅದರಿಂದಲೇ ಷೇರ್-ಅಫ್‍ಘಾನ್‍ನ ಜೀವಕ್ಕೆ ಸಂಚಕಾರ ಒದಗಿತೆಂದೂ ಹೇಳಲಾಗಿದೆ. ಆದರೆ ಸಮಕಾಲೀನ ಭಾರತೀಯ ಇತಿಹಾಸಕಾರರೂ ಐರೋಪ್ಯ ಪ್ರವಾಸಿಗಳೂ ಈ ರೀತಿ ಬರೆದಿಲ್ಲ. ಅನಂತರದ ಲೇಖಕರು ಹೀಗೆ ಹೇಳಿದ್ದಾರೆ. ಷೇರ್-ಅಫ್‍ಘಾನ್ ತೀರಿಕೊಂಡಾಗ ಅವಳನ್ನು ಅವಳ ತಂದೆಯ ಬಳಿಗೆ ಕರೆದೊಯ್ಯದೇ ಆಸ್ಥಾನಕ್ಕೇಕೆ ತರಲಾಯಿತೆಂಬುದು ಒಂದು ಒಗಟಾಗಿಯೇ ಉಳಿದಿದೆ. ಜಹಾಂಗೀರ್ ಅನೇಕರೊಂದಿಗೆ ರಹಸ್ಯ ಪ್ರಣಯ ನಿರತನಾಗಿದ್ದನೆಂಬುದಕ್ಕೆ ಇತಿಹಾಸದ ಆಧಾರಗಳಿವೆ. 1611ರಿಂದ ತನ್ನ ಮರಣದವರೆಗೆ ನೂರ್ ಜಹಾನ್ ಹೆಚ್ಚೂ ಕಡಿಮೆ ಹಿಂದೂಸ್ಥಾನದ ನಿಜವಾದ ಚಕ್ರವರ್ತಿನಿಯಂತೆಯೇ ವರ್ತಿಸಿದಳು. ಜಹಾಂಗೀರನ ಮೇಲೆ ಪ್ರಭಾವ ಬೀರಿ ಆಡಳಿತ ಸೂತ್ರಗಳನ್ನು ತನ್ನ ಕೈಯಲ್ಲಿ ಹಿಡಿದಿಟ್ಟುಕೊಂಡಿದ್ದಳು. ಅವಳೊಬ್ಬ ಚತುರೆಯೂ ಸೌಂದರ್ಯವತಿಯೂ ಆದ ಸ್ತ್ರೀಯಾಗಿದ್ದಳು. ಅವಳ ಮಾತನ್ನು ಯಾರೂ ತೆಗೆದುಹಾಕುವಂತಿರಲಿಲ್ಲ. ಪ್ರಜೆಗಳ ಅಹವಾಲುಗಳನ್ನು ಕೇಳಲು ಚಕ್ರವರ್ತಿ ದರ್ಶನ ನೀಡುತ್ತಿದ್ದ ಕಿಟಕಿಯ ಬಳಿ ಅವಳು ಕುಳಿತಿರುತ್ತಿದ್ದಳು. ನಾಣ್ಯಗಳ ಮೇಲೆ ಚಕ್ರವರ್ತಿಯ ಹೆಸರಿನ ಪಕ್ಕದಲ್ಲಿಯೇ ತನ್ನ ಹೆಸರನ್ನು ಕೆತ್ತಿಸಿದಳು. ಅವಳ ವ್ಯಕ್ತಿತ್ವದಲ್ಲಿ ಔದಾರ್ಯವೂ ಕರುಣೆಯೂ ಹಾಸುಹೊಕ್ಕಾಗಿದ್ದವು. ಆಕೆ ಅನೇಕರಿಗೆ ಆಶ್ರಯ ನೀಡಿದಳು. ಶೀಘ್ರ ಕೋಪಿಯಾದ ಜಹಾಂಗೀರನ ಕ್ರೂರತೆಯನ್ನು ನಿಯಂತ್ರಿಸುವುದರಲ್ಲಿ ಅವಳ ವ್ಯಕ್ತಿತ್ವ ಪ್ರಭಾವ ಬೀರಿತು. ಆದರೆ, ಅವಳ ರಾಜಕೀಯ ಪ್ರಭಾವದಿಂದ ಸಾಮ್ರಾಜ್ಯಕ್ಕೆ ಕೆಡುಕುಂಟಾಯಿತು. ತನ್ನ ಮನೆತನದ ಹಿತಾಸಕ್ತಿಗಳನ್ನು ಬೆಳೆಸುವುದಕ್ಕೂ ದುರಾಸೆಯ ಸಂಬಂಧಿಕರಿಗೆ ಉನ್ನತ ಹುದ್ದೆಗಳನ್ನು ಕೊಡಿಸುವುದಕ್ಕೂ ಅವಳು ಅಧಿಕಾರವನ್ನು ಉಪಯೋಗಿಸಿಕೊಂಡಳು. ಅವಳ ತಂದೆ ಇತಿಮಾದ್ ಉದ್ ದೌಲನೆಂಬ ಬಿರುದಿನಿಂದ ಮುಖ್ಯಮಂತ್ರಿಯ ಪದವಿಗೇರಿದ. ಅವಳ ಸೋದರ ಆಸಫಖಾನ್ ಆಸ್ಥಾನದಲ್ಲಿ ಪ್ರಭಾವಶಾಲಿ ವ್ಯಕ್ತಿಯಾದ. ತನಗೆ ಮೊದಲ ಗಂಡನಿಂದ ಜನಿಸಿದ ಮಗಳನ್ನು ಆಕೆ ಜಹಾಂಗೀರನ ಕೊನೆಯ ಮಗ ರಾಜಕುಮಾರ ಷಹರ್‍ಯಾರ್‍ಗೆ ಮದುವೆ ಮಾಡಿಕೊಟ್ಟಳು. ರಾಜಕುಮಾರ ಖುರ್ರಮನನ್ನು ಮದುವೆಯಾದ, ಮುಂದೆ ಮುಮ್ತಾಜ್ ಮಹಲ್ ಎಂದು ಪ್ರಸಿದ್ಧಳಾದ ಅರ್ಜುಮಂದ್ ಬಾನು ನೂರ್ ಜಹಾನ್‍ಳ ಸಹೋದರ ಅಫ್‍ಖಾನಳ ಮಗಳು. ನೂರ್ ಜಹಾನ್ ತನ್ನದೇ ಆದ ಗುಂಪೊಂದನ್ನು ಕಟ್ಟಿ ಅಧಿಕಾರ ನಡೆಸಿದಳು. ಅವಳ ಅಧಿಕಾರವನ್ನೂ ಪ್ರಭಾವವನ್ನೂ ಜಹಾಂಗೀರನ ಪ್ರಬಲ ಸೇನಾಧಿಪತಿಯಾಗಿದ್ದ ಮಹಬತ್ ಖಾನನೂ ರಾಜಕುಮಾರ ಖುರ್ರಮನೂ ವಿರೋಧಿಸಿದರು. ಆದರೆ, ಚತುರೆಯಾದ ನೂರ್ ಜಹಾನ್‍ಳು ಅವರ ಪ್ರಯತ್ನಗಳನ್ನೆಲ್ಲ ವಿಫಲಗೊಳಿಸಿದಳು. ಜಹಾಂಗೀರ್ ಬದುಕಿದ್ದವರೆಗೂ ನೂರ್ ಜಹಾನ್‍ಳ ಅಧಿಕಾರ ಅವ್ಯಾಹತವಾಗಿ ನಡೆಯಿತು. ಅವನು 1627ರಲ್ಲಿ ತೀರಿಕೊಂಡ. ಅನಂತರ ಅವಳ ಬಲ ಕುಗ್ಗಿತು. 1645ರಲ್ಲಿ ಮರಣ ಹೊಂದುವವರೆಗೂ ಆಕೆ ಲಾಹೋರಿನಲ್ಲಿ ಒಂಟಿಯಾಗಿ ಜೀವಿಸಿದಳು.

	ನೂರ್ ಜಹಾನಳಿಗೆ ಕಲೆಯಲ್ಲಿ ಆಸಕ್ತಿಯಿತ್ತು. ತನ್ನ ತಂದೆ ಇತಿಮಾದ್-ಉದ್-ದೌಲನಿಗಾಗಿ ಈಕೆ ಆಗ್ರಾದಲ್ಲಿ ಕಟ್ಟಿಸಿದ ಗೋರಿ ಈಕೆಯ ಕಲಾಭಿರುಚಿಯ ದ್ಯೋತಕವಾಗಿದೆ.								(ಎಸ್.ಕೆ.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ